ಗೋತಮಿ ಬಲಸಿರಿ

ನಾಸಿಕದ ಬೆಟ್ಟದಲ್ಲಿರುವ ಬೌದ್ಧ ಗುಹಾಶಾಸನ ಒಂದರಲ್ಲಿ ಉಲ್ಲೇಖಿತಳಾಗಿರುವ ಒಬ್ಬ ರಾಜಮಾತೆ. ಈ ಶಾಸನವನ್ನು ಶಾತವಾಹನ ರಾಜನಾದ ವಾಸಿಷ್ಠೀಪುತ್ರ ಪುಳುಮಾಯಿಯ ರಾಜ್ಯಾಡಳಿತದ 19ನೆಯ ವರ್ಷದಲ್ಲಿ ಬರೆಯಲಾಯಿತು. ಅಸಿಕ, ಅಸಕ, ಮೂಲಕ, ಸುರಥ, ಕುಕುರ, ಅಪರಾನ್ತ, ಅನುಪ, ವಿದಭ, ಆಕರಾವನ್ತೀ ಮೊದಲಾದ ಪ್ರಾಂತ್ಯಗಳಿಗೆ ಅಧಿಪತಿಯಾದ ಮತ್ತು ಶಕ, ಯವನ, ಪಹ್ಲವ, ಖಕರಾತರನ್ನು ಸೋಲಿಸಿ ಧ್ವಂಸ ಮಾಡಿ ಶಾತವಾಹನರ ಹಿರಿಮೆ ಗರಿಮೆಗಳನ್ನು ಪುನಃ ಸ್ಥಾಪಿಸಿದ ರಾಜ ರಾಣೋ ಸಿರಿಸಾತಕಣಿಯ ತಾಯಿಯೆಂದು ಗೋತಮಿಯನ್ನು ವರ್ಣಿಸಿದೆ. ಸತ್ಯ ಶಾಚ ಆಚಾರ ಸಹನೆ ತ್ಯಾಗ ಸಂಯಮ ಶೀಲಸಂಪನ್ನೆಯಾಗಿದ್ದು, ಸಂಪೂರ್ಣ ರಾಜರ್ಷಿ ಪತ್ನಿಯ ಹಾಗೆ ಇದ್ದಳೆಂದು ಆಕೆಯನ್ನು ವರ್ಣಿಸಿದೆಯಲ್ಲದೆ ಆಕೆಯ ಸಂತೋಷಕ್ಕಾಗಿಯೆ ಭದಾಯನಿ ಅಥವಾ ಭದಾಯಣೀಯ ಸಂಘದ ಬೌದ್ಧ ಭಿಕ್ಷುಗಳಿಗೆ ಪಿಶಾಜಿ ಪದಕ ಎಂಬ ಊರನ್ನು ದತ್ತಿ ಕೊಡಲಾಯಿತೆಂದು ಬರೆದಿದೆ. ಈ ಗೋತಮಿ ಬಲಸಿರಿಯ ಪ್ರೀತಿಗಾಗಿಯೇ ಶಿರಣ್ಹು ಬೆಟ್ಟದಲ್ಲಿ ಲೇಣ ಗುಹೆಯನ್ನು ಕೊರೆಯಿಸಿ, ಭದಾಯಣೀಯ ನಿಕಾಯ ಶಾಖೆಯ ಬೌದ್ಧ ಭಿಕ್ಷುಗಳಿಗೆ ಅದನ್ನು ವಿಶೇಷ ಆಸ್ತಿಯೆಂದು ದತ್ತಿಯಾಗಿ ಬಿಟ್ಟುದನ್ನೂ ಶಾಸನದಲ್ಲಿ ಬರೆದಿದೆ. ಈಕೆ ಕ್ರಿ. ಪೂ. ಸು. 2ನೆಯ ಇಲ್ಲವೆ ಕ್ರಿ. ಶ. ಸು. 1-2ನೆಯ ಶತಮಾನದಲ್ಲಿದ್ದಿರಬಹುದು.
(ಎಸ್.ಎಸ್.ಜೆಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ